ಆತ್ಮಪ್ರತಿಷ್ಠೆ, ಆತ್ಮಶರಣಾಗತಿ
ತಾನು ಹೇಳುವುದೇ ಸರಿ, ಮಾಡಿದ್ದೇ ಸರಿ ಎಂದು ವಾದಿಸಿ ತನ್ನ ಶ್ರೇಷ್ಠತೆಯನ್ನು ಸಮರ್ಥಿಸುವ ಗುಣಕ್ಕೆ ಆತ್ಮಪ್ರತಿಷ್ಠೆ ಎನ್ನುತ್ತಾರೆ. ತದ್ವಿರುದ್ಧವಾದದ್ದು ಆತ್ಮಶರಣಾಗತಿ. ಮೃಗಪ್ರಪಂಚದಲ್ಲಿ ಬುದ್ಧಿ, ದೇಹಶಕ್ತಿ ಇವುಗಳಲ್ಲಿ ಮಿಗಿಲಾಗಿರುವ ಪ್ರಾಣಿ ಇತರ ಪ್ರಾಣಿಗಳ ಮೇಲೆ ತನ್ನ ಪ್ರತಿಷ್ಠೆಯನ್ನು ಚಲಾಯಿಸುವುದು ಸಾಮಾನ್ಯ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸ್ಪೆನ್ಸರ್ ಶ್ರೇಷ್ಠತೆ - ಕನಿಷ್ಠತೆಯ ತತ್ತ್ವವನ್ನು ನಿರೂಪಿಸಿದ.

ಮನಃಶ್ಯಾಸ್ತ್ರ ಈ ವಿಷಯವನ್ನು ಚೆನ್ನಾಗಿ ವಿಶ್ಲೇಷಿಸಿದೆ. ಆತ್ಮಪ್ರತಿಷ್ಠೆಯವ ಸಮಾಜದ ಇತರರ ಮೇಲೆ ತನ್ನ ಪ್ರಭಾವ ಬೀರುವ ಪ್ರವೃತ್ತಿಯವನಾಗಿರುತ್ತಾನೆ. ಅವನಿಗೆ ಆತ್ಮವಿಶ್ವಾಸ ಹೆಚ್ಚು. ಎಲ್ಲದರಲ್ಲೂ ಮೇಲುಗೈಯಾಗಿರಬೇಕೆಂಬುದೇ ಅವನ ಧ್ಯೇಯ. ತನ್ನ ನ್ಯೂನತೆಗಳನ್ನೂ ಆತ ಗುಣಗಳನ್ನಾಗಿ ಮಾರ್ಪಡಿಸಿಕೊಳ್ಳಬಲ್ಲ. ಆ ಗುಣವಿಲ್ಲದವ ಸಾಮಾನ್ಯವಾಗಿ ದುರ್ಬಲ ಮನೋಭಾವದವನಾಗಿರುತ್ತಾನೆ. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾನಲ್ಲದೆ ಬಹಳ ಸುಲಭವಾಗಿ ಇತರರ ಪ್ರಭಾವಕ್ಕೆ ಒಳಗಾಗುತ್ತಾನೆ. ದೈಹಿಕನ್ಯೂನತೆಗಳು, ಅಪಮಾನಕರ ಪ್ರಸಂಗಗಳಿಗೆ ಸಂಬಂಧಪಟ್ಟ ಭಾವನೆಗಳ ಮರುಕಳಿಕೆ ತನಗಿಂತ ಶ್ರೇಷ್ಠರೆನಿಸಿದವರೊಡನೆ ಹೋಲಿಸಿಕೊಂಡು ಹೀನಾಯಪಟ್ಟುಕೊಳ್ಳುವ ಮನೋಭಾವ - ಇವೇ ಮೊದಲಾದ ಗುಣಗಳಿಂದ ಕೂಡಿರುತ್ತಾನೆ. ಅಲ್ಲದೆ ತನ್ನ ಅಭಿಪ್ರಾಯ ಮತ್ತು ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವುದರಲ್ಲಿ ಅನೇಕ ವೇಳೆ ವಿಫಲನಾಗುತ್ತಾನೆ.
ಜಿ. ಡಬ್ಲ್ಯೂ. ಆಲ್ಪೋರ್ಟ್ ಹೇಳುವಂತೆ, ಪ್ರತಿಯೊಂದು ಸಾಮಾಜಿಕ ಸಂಬಂಧದಲ್ಲೂ ವ್ಯಕ್ತಿಗಳ ಪರಸ್ಪರ ತಿಕ್ಕಾಟವಿದ್ದೇ ಇರುತ್ತದೆ. ಅವರು ಸಂಧಿಸಿದಾಗ ಸಾಮಾನ್ಯವಾಗಿ, ಒಬ್ಬ ಮತ್ತೊಬ್ಬನಿಗೆ ಪೂರ್ಣವಾಗಿಯಾಗಲಿ ಅಥವಾ ಸ್ವಲ್ಪವಾಗಿಯಾಗಲಿ ಶರಣಾಗಲೇಬೇಕು. ಇಂಥ ಸಂದರ್ಭಗಳಲ್ಲಿ ಆ ವ್ಯಕ್ತಿಗಳಲ್ಲಿರುವ ಸಂಬಂಧ ಯಾವ ರೀತಿಯದೆ ಆಗಿರಲಿ - ಮಿತ್ರತ್ವವಾಗಲಿ ಅಥವಾ ಶತ್ರುತ್ವವಾಗಲಿ - ಒಬ್ಬ ಮತ್ತೊಬ್ಬನ ಮೇಲೆ ಪ್ರಭಾವ ಬೀರಿ ವಿಜಯಿ ಎನಿಸಿಕೊಂಡರೆ ಮತ್ತೊಬ್ಬ ಶರಣಾಗಿ ಪರಾಭವಿ ಎನಿಸಿಕೊಳ್ಳುತ್ತಾನೆ. ಒಮ್ಮೆ ಪರಾಭವಿ ಎನಿಸಿಕೊಂಡವ ತನ್ನ ಹಿಡಿತಕ್ಕೆ ಸಿಗುವ ವಿಷಯಕ್ಕೆ ಬಂದಾಗ ತನ್ನ ಹಿರಿಮೆಯನ್ನು ತೋರಿಸಿ, ಮೊದಲು ವಿಜಯಿ ಎನಿಸಿಕೊಂಡವನ ಮೇಲೂ ವಿಜಯವನ್ನು ಗಳಿಸಬಹುದು.
ಈ ಎರಡು ಪ್ರವೃತ್ತಿಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರ್ಣಯಿಸುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ವ್ಯಕ್ತಿಯ ದೃಷ್ಟಿಯಿಂದ ನೋಡಿದಲ್ಲಿ ಆತ್ಮಪ್ರತಿಷ್ಠೆಯೇ ಸರ್ವದಾ ಉತ್ತಮಗುಣವಾಗಿ ತೋರುತ್ತದೆ. ಏಕೆಂದರೆ ವೈಯಕ್ತಿಕ ಅಭಿವೃದ್ಧಿಗೆ ಅದಕ್ಕಿಂತ ಸುಲಭ ಮಾರ್ಗವಿಲ್ಲ. ಆದರೆ ತಪ್ಪನ್ನೂ ಸರಿಯೆಂದು ವಾದಿಸಿ ಸ್ವಾರ್ಥಸಾಧನೆ ಮಾಡುವುದು ಸಾಮಾಜಿಕವಾಗಿ ದೊಡ್ಡ ಅನ್ಯಾಯ. ನಾವು ಸತ್ಯಕ್ಕೆ ನ್ಯಾಯಕ್ಕೆ ಧರ್ಮಕ್ಕೆ ಪರಾರ್ಥಕ್ಕೆ ಸೋಲಬೇಕು. ಆತ್ಮಪ್ರತಿಷ್ಠೆ ಮಾಡುವ ಅನ್ಯಾಯಕ್ಕೆ ಶರಣಾಗುವ ಗುಣ ಗುಣವೇ ಅಲ್ಲ. ಅದೊಂದು ದೊಡ್ಡ ದೋಷ. ನ್ಯಾಯಕ್ಕೆ ಸೋಲುವಂತೆ ಅನ್ಯಾಯಕ್ಕೆ ಎದುರಾಗಿ ಪ್ರತಿಭಟಿಸಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಹೊಂದಾಣಿಕೆಯ ದೃಷ್ಟಿಯಿಂದ ಈ ಎರಡು ಪ್ರವೃತ್ತಿಗಳ ಹೊಂದಾಣಿಕೆ ಅಗತ್ಯ.

ಆತ್ಮಪ್ರತಿಷ್ಠೆ ಮತ್ತು ಶರಣಾಗತಿಗಳೆರೆಡೂ ಭಿನ್ನಗುಣಗಳಾಗಿ ತೋರಿದರೂ ಅವು ಒಂದೇ ವ್ಯಕ್ತಿತ್ವ - ವಿನ್ಯಾಸದ ಅವಿಭಾಜ್ಯ ಅಂಗಗಳು. ಅಂದರೆ ಒಂದೇ ಗುಣದ ಎರಡು ಮುಖಗಳು ಎಂದು ಹೇಳಬಹುದು. ಹೀಗೆ ಇವೆರಡೂ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇದ್ದರೂ ಯಾವ ಗುಣ ಹೆಚ್ಚು ಶಕ್ತಿಯುತವಾಗಿದೆ ಎಂಬುದನ್ನು ಅನುಸರಿಸಿ, ಆ ವ್ಯಕ್ತಿಯನ್ನು ವರ್ಗೀಕರಿಸಬೇಕಾಗುತ್ತದೆ.
ಯಾವ ಸಮಾಜದಲ್ಲಾದರೂ ಕೆಲವು ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ಸ್ವಪ್ರತಿಷ್ಠಾವಂತರೆನಿಸಿದ್ದರೆ, ಮತ್ತೆ ಕೆಲವರು ಹೆಚ್ಚಾಗಿ ಶರಣಾಗುವ ಪ್ರವೃತ್ತಿಯವರಾಗಿರುತ್ತಾರೆ. ಉಳಿದವರಲ್ಲಿ ಈ ಎರಡು ಗುಣಗಳೂ ಹೆಚ್ಚು ಕಡಿಮೆ ಸಮಸಮವಾಗಿ ಅಸ್ತಿತ್ವದಲ್ಲಿರುತ್ತವೆ. ವ್ಯಕ್ತಿಯ ಮನೋಭಾವ ಮತ್ತು ಪರಿಸರಗಳನ್ನು ಅನುಸರಿಸಿ ಈ ಗುಣಗಳು ಚಿಕ್ಕಂದಿನಿಂದ ಅಭಿವೃದ್ಧಿ ಹೊಂದುತ್ತ ಹೋಗಿ, ತಾರುಣ್ಯಾವಸ್ಥೆ ಕಳೆಯುವ ವೇಳೆಗಾಗಲೇ ವ್ಯಕ್ತಿತ್ವದಲ್ಲಿ ಚೆನ್ನಾಗಿ ಪ್ರತಿಷ್ಠಿತವಾಗಿರುತ್ತವೆ. ಆ ಕಾಲದಲ್ಲಿ ಅವುಗಳನ್ನು ವೈಜ್ಞಾನಿಕವಿಧಾನದಿಂದ ಅಧ್ಯಯನ ಮಾಡುವುದರ ಮೂಲಕ ಅವುಗಳು ಭವಿಷ್ಯದಲ್ಲಿ ಹೇಗೆ ಪ್ರಕಟವಾಗುತ್ತವೆ ಎಂಬುದನ್ನು ಹೇಳಬಹುದು.

ಮಾಪನ : ಪ್ರತಿಷ್ಠೆ, ಶರಣಾಗತಿಗಳು ವ್ಯಕ್ತಿತ್ವವಿನ್ಯಾಸದ ಮೇಲೆ ಬೀರಬಹುದಾದ ಪ್ರಭಾವಕ್ಕೆ ಸಂಬಂಧಪಟ್ಟಂತೆ ಸಂಶೋಧನೆಗಳು ನಡೆದಿವೆ. ಅದಕ್ಕೆ ವಿವಿಧ ವಿಧಾನಗಳನ್ನು ಬಳಸಿದ್ದರೂ ಅಂಶಾವಳಿ ವಿಧಾನವನ್ನು (ಇನ್‍ವೆಂಟರಿ ವಿಧಾನ) ಉಪಯೋಗಿಸಿಕೊಂಡು ನಡೆಸಿರುವ ಸಂಶೋಧನೆಗಳೇ ಹೆಚ್ಚು. ಈ ಒಲವಿಗೆ ಆಲ್ಪೋರ್ಟ್‍ನ ಸಂಶೋಧನೆಯೇ ಪ್ರೇರಕಶಕ್ತಿಯಾಗಿದೆ ಎಂದು ತೋರುತ್ತದೆ.
ಆಲ್ಪೋರ್ಟ್‍ನ ಪ್ರಕಾರ, ಈ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳು ಮುಖ್ಯವಾಗಿ ಎರಡು ವೈಜ್ಞಾನಿಕ ಊಹೆಗಳನ್ನು ಅವಲಂಬಿಸಿವೆ : 1. ವ್ಯಕ್ತಿತ್ವವಿನ್ಯಾಸಗಳು, ಯಾವುದೇ ಜನತೆಯಲ್ಲಾದರೂ ಸಾಮಾನ್ಯವಿತರಣತತ್ತ್ವವನ್ನು ಅನುಸರಿಸುತ್ತವೆ. ಪ್ರತಿಷ್ಠೆ ಮತ್ತು ಶರಣಾಗತಿಗಳ ವಿನ್ಯಾಸವೂ ಕೂಡ ಇದೇ ತತ್ತ್ವವನ್ನು ಅನುಸರಿಸುವುದಾದರೆ ಅದನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಲು ಹೆಚ್ಚು ಅನುಕೂಲವಾಗುತ್ತದೆ. 2. ಒಬ್ಬ ವ್ಯಕ್ತಿಯ ಜೀವನದಲ್ಲಿ ಬರಬಹುದಾದ ಸಾಮಾಜಿಕ ಸನ್ನಿವೇಶಗಳಲ್ಲಿ ಕೆಲವನ್ನು ನಮೂನಾ ವಿಧಾನದಿಂದ ಆರಿಸಿಕೊಂಡು, ಅವುಗಳನ್ನು ಶಾಬ್ದಿಕ ರೂಪದಲ್ಲಿ ನಿರೂಪಿಸಿ ಅಂಥ ಸನ್ನಿವೇಶಗಳಲ್ಲಿ ಆತ ಸಾಮಾನ್ಯವಾಗಿ ವರ್ತಿಸುವ ರೀತಿಯನ್ನು ಆತನ ಪ್ರತಿಕ್ರಿಯೆಗಳಿಂದ ಸಂಗ್ರಹಿಸಬಹುದು. ಹೀಗೆ ಬಂದ ಉತ್ತರಗಳನ್ನು ಪಾರಿಮಾಣಿಕ ವಿಧಾನದಿಂದ ವಿಶ್ಲೇಷಿಸಿ ನಡೆದ ಸೂಚ್ಯಂಕದಿಂದ ಆತನ ಪ್ರತಿಷ್ಠೆ ಅಥವಾ ಶರಣಾಗತಿ ಪ್ರವೃತ್ತಿ ಎಷ್ಟೆಂಬುದನ್ನು ನಿರ್ಧರಿಸಲು ಸಾಧ್ಯ.

ಆಲ್ಪೋರ್ಟ್‍ನ ಸಮೀಕ್ಷೆ : ಮೇಲ್ಕಂಡ ಊಹೆಗಳ ಆಧಾರದ ಮೇಲೆ ಆಲ್ಪೋರ್ಟ್ ತನ್ನ ಅಂಶಮಾಲೆಯಾದ ಪ್ರತಿಷ್ಠೆ, ಶರಣಾಗತಿ, ಪ್ರತಿಕ್ರಿಯಾಸಮೀಕ್ಷೆಯನ್ನು ರಚಿಸಿದ. ಈ ಸಮೀಕ್ಷೆ 33 ಸನ್ನಿವೇಶಗಳನ್ನು ಒಳಗೊಂಡಿದೆ. ಇಲ್ಲಿರುವ ಪ್ರತಿಯೊಂದು ಅಂಶವೂ ಯಾವುದಾದರೊಂದು ಜೀವನ ಸನ್ನಿವೇಶವನ್ನು ನಿರೂಪಿಸುತ್ತದೆಯಲ್ಲದೆ, ಆಯಾ ಸನ್ನಿವೇಶದಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ ನಡೆದುಕೊಳ್ಳಬಹುದಾದ ಕೆಲವು ವರ್ತನೆಗಳನ್ನೂ ಒಳಗೊಂಡಿದೆ. ಇಂಥ ವರ್ತನೆಗಳು ಒಂದೊಂದು ಅಂಶದಲ್ಲೂ ನಿರೂಪಿತವಾಗಿರುವ ಸನ್ನಿವೇಶದಲ್ಲಿ ತಾನು ಸಾಮಾನ್ಯವಾಗಿ ವರ್ತಿಸುವ ರೀತಿಗನುಗುಣವಾಗಿ ಸೂಚಿತವಾಗಿರುವ ವರ್ತನೆಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕು. ಇದೇ ರೀತಿ ಎಲ್ಲ ಅಂಶಗಳಿಗೂ ಆಯ್ಕೆಗಳನ್ನು ವ್ಯಕ್ತಪಡಿಸಿದ ಅನಂತರ, ನಿರ್ದಿಷ್ಟ ಪ್ರಮಾಣದ ಕೀಲಿಕೈನ ಸಹಾಯದಿಂದ ಆ ಪ್ರತಿಕ್ರಿಯೆಗಳ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಆ ಮೌಲ್ಯಗಳ ಮೊತ್ತವೇ ಪ್ರತಿಷ್ಠೆ, ಶರಣಾಗತಿ ವ್ಯಕ್ತಿತ್ವವಿನ್ಯಾಸದ ಸೂಚ್ಯಂಕ.

ಅಂಶಮಾಲೆಯಲ್ಲಿ ಸ್ತ್ರೀಯರು ಮತ್ತು ಪುರುಷರಿಗೆ ಪ್ರತ್ಯೇಕ ನಿರೂಪಣೆಗಳಿವೆ. ಸ್ತ್ರೀಪುರುಷರಿಗೆ ದೊರೆಯಬಹುದಾದ ಸಾಮಾಜಿಕ ಅವಕಾಶಗಳಲ್ಲಿ ಇರಬಹುದಾದ ವ್ಯತ್ಯಾಸಗಳೇ ಇದಕ್ಕೆ ಕಾರಣ. ವಿವರಗಳನ್ನು ಕೆಳಗಿನ ಕೋಷ್ಟಕದಿಂದ ತಿಳಿಯಬಹುದು.
 ಕೋಷ್ಟಕ 1. ಪುರುಷರ ಮತ್ತು ಸ್ತ್ರೀಯರ ಅಂಶಗಳು 
ವಿವರ
ಪುರುಷರು
ಸ್ತ್ರೀಯರು

ಸನ್ನಿವೇಶಗಳು
33
35

ಅಂಶಗಳು
41
49

 ವರ್ತನೆಗಳು
123
140

ಈ ಸಮೀಕ್ಷೆಯ ವಿಶ್ವಸನೀಯತೆ ಮತ್ತು ಸಪ್ರಾಮಾಣಿಕತೆಗಳಿಗೆ ಸಂಬಂಧಪಟ್ಟಂತೆ ಅಧ್ಯಯನಗಳು ನಡೆದಿವೆ. ಆಲ್ಪೋರ್ಟ್‍ನ ಅಧ್ಯಯನದ ಪ್ರಕಾರ ಅರ್ಥ - ವಿಭಾಜಿತ ವಿಶ್ವಸನೀಯತಾ ಗುಣಾಂಕ 1.582. ಅದನ್ನು ಸ್ಪಿಯರ್‍ಮನ್ - ಬ್ರೌನ್ ಸೂತ್ರದಿಂದ ಸರಿಪಡಿಸಿದಾಗ 1.737 ಆಗುತ್ತದೆ. ಬ್ರೂಮ್ ಹನ್ನಾ ಮೊದಲಾದವರ ಸಂಶೋಧನೆಗಳಿಂದ ಈ ಸಮೀಕ್ಷೆಯ ವಿಶ್ವಾಸನೀಯತಾ ಗುಣಾಂಕಗಳ ವ್ಯಾಪ್ತಿ 0.74 ರಿಂದ 0.85ರ ವರೆಗೆ ಇರುವುದು ತಿಳಿದುಬಂದಿದೆ. ಇದರಿಂದಾಗಿ ಈ ಸಮೀಕ್ಷೆ ಗಣನೀಯ ವಿಶ್ವಾಸನೀಯತೆಯಿಂದ ಕೂಡಿದೆಯೆಂಬುದು ವ್ಯಕ್ತವಾಗುತ್ತದೆ.
ಈ ಸಮೀಕ್ಷೆಯ ಸಿಂಧುತ್ವವನ್ನು ನಿರ್ಧರಿಸುವುದಕ್ಕೆ ಅತ್ಯಾವಶ್ಯಕವಾದ ಒರೆಗಲ್ಲು ಸಿಗುವುದು ಕಷ್ಟಕರವಾದರೂ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಅಧ್ಯಯನಗಳು ನಡೆದಿವೆ. ನಿಶ್ಚಯತಾವಿಧಾನವನ್ನು ಉಪಯೋಗಿಸಿಕೊಂಡು ನಡೆಸಿದ ಅಧ್ಯಯನವೊಂದರ ತಥ್ಯಾಂಶಗಳು ಹೀಗಿವೆ.

 	ಕೋಷ್ಟಕ 2 . ವರ್ಗೀಕರಣ ವಿಧಾನದಿಂದ ಪಡೆದ ಸಿಂಧುತ್ವ ಗುಣಾಂಕಗಳು
ಕ್ರಮ ಸಂಖ್ಯೆ 
ವರ್ಗೀಕರಣ ವಿಧಾನ
ಸಿಂಧುತ್ವ ಗುಣಾಂಕ

1.
ಆಲ್ಪೋರ್ಟ್‍ನ ಸಮೀಕ್ಷೆಯ ಪ್ರಾಪ್ತಾಂಕಗಳಿಗೂ ಸ್ವವರ್ಗೀಕರಣ ಮತ್ತು ಪರವರ್ಗೀಕರಣಗಳ ಸಂಯೋಜಿತ ಪ್ರಾಪ್ತಾಂಕಗಳಿಗೂ ಇರುವ ಸಹಸಂಬಂಧ
 .586 ( .045

2.
ಆಲ್ಪೋರ್ಟ್‍ನ ಸಮೀಕ್ಷೆ ಮತ್ತು ಸ್ವವರ್ಗೀಕರಣ ಸಹಸಂಬಂಧ
 .833 ( .021

3.
ಆಲ್ಪೋರ್ಟ್‍ನ ಸಮೀಕ್ಷೆ ಮತ್ತು ಪರವರ್ಗೀಕರಣ ಸಹಸಂಬಂಧ
 .459 ( .028

4.
ಸ್ವವರ್ಗೀಕರಣ ಮತ್ತು ಪರವರ್ಗೀಕರಣಗಳ ಸಹಸಂಬಂಧ
 .493 ( .026

ಈ ಸಮೀಕ್ಷೆಯ ಅಂತಃಸ್ಥಾಯಿತ್ವವನ್ನು ಅಧ್ಯಯನಮಾಡಿ, ಪುರುಷರ 21 ಅಂಶಗಳು ಕೊಟ್ಟಿರುವ ವ್ಯಕ್ತಿತ್ವವಿನ್ಯಾಸದ ಸ್ವಭಾವ ನಿರೂಪಣಾಶಕ್ತಿಯಲ್ಲಿ ಶ್ರೇಷ್ಠ ದರ್ಜೆಯವಾಗಿಯೂ, 9 ಅಂಶಗಳು ಮಧ್ಯಮ ದರ್ಜೆಯವಾಗಿಯೂ, 11 ಅಂಶಗಳು ಕನಿಷ್ಠ ದರ್ಜೆಯವಾಗಿಯೂ ಇವೆಯೆಂದು ನಿರ್ಧರಿಸಲಾಗಿದೆ.

ಆಲ್ಪೋರ್ಟ್‍ನ ಸಮೀಕ್ಷೆಗೂ ಇತರ ವ್ಯಕ್ತಿತ್ವ ಪರೀಕ್ಷೆಗಳಿಗೂ ಇರಬಹುದಾದ ಸಹಸಂಬಂಧದ ಮೇಲೆ ನಡೆದ ಅಧ್ಯಯನಗಳಿಂದ ಕೆಲವು ತಥ್ಯಾಂಶಗಳು ಬೆಳಕಿಗೆ ಬಂದಿವೆ. ಬರ್ನ್‍ರಾಯಿಟರನ ದರ್ಪಮನೋಭಾವಕ್ಕೂ (ಡಾಮಿನೆನ್ಸ್) ಸ್ವಪ್ರತಿಷ್ಠೆಗೂ ಅಧಿಕ ಮಟ್ಟದ ಸಮ ಸಹಸಂಬಂಧವಿದೆ. (ಸಂ ( ಡಿ ) = --0.80). ತರ್ಸ್‍ಟನ್ನನ ವ್ಯಕ್ತಿತ್ವ ಪ್ರಶ್ನಾವಳಿಗೂ ಆಲ್ಪೋರ್ಟ್‍ನ ಪ್ರತಿಷ್ಠೆ, ಶರಣಾಗತಿ ಪ್ರತಿಕ್ರಿಯೆ ಸಮೀಕ್ಷೆಗಳಿಗೂ ಗಣನೀಯ ಪ್ರಮಾಣದ ಸಹಸಂಬಂಧವಿದೆ. ಇದರಂತೆಯೇ ಬಹಿರ್ಮುಖತ್ವ ಅಂತರ್ಮುಖತ್ವ ಮತ್ತು ಪ್ರತಿಷ್ಠೆ, ಸ್ವಶರಣಾಗತಿಗಳಿಗೆ ಸಹಸಂಬಂಧವಿರುವುದು ವ್ಯಕ್ತಪಟ್ಟಿದೆ. ನರರೋಗ ಪ್ರವೃತ್ತಿಗೂ (ನ್ಯೂರೋಟಿಸಿನಂ) ಶರಣಾಗತಿಗೂ ನೇರವಾದ ಸಹಸಂಬಂಧವಿದೆಯೆಂದು ಸ್ಟಾಗ್ನರ್ ತನ್ನ ಅಧ್ಯಯನದಿಂದ ಸಿದ್ಧಪಡಿಸಿದ್ದಾನೆ. ಈ ರೀತಿ ಕೆಲವು ವ್ಯಕ್ತಿತ್ವ ಪರೀಕ್ಷೆಗಳಲ್ಲಿರುವ ಪರಸ್ಪರ ಸಹಸಂಬಂಧಕ್ಕೆ ಅವುಗಳಲ್ಲಿರುವ ಅಂಶಗಳ ಪರಸ್ಪರ ಸಾಮ್ಯವೇ ಕಾರಣವೆಂಬುದು ಕೆಲವರ ಅಭಿಮತ.

ವ್ಯಕ್ತಿತ್ವ ಪರೀಕ್ಷೆಗಳಿಗೆ ಸೂಕ್ತ ಒರೆಗಲ್ಲಿಗಳ ಅಭಾವವಿರುವುದರಿಂದ ಅವುಗಳ ಸಿಂಧುತ್ವ ಇಂತಿಷ್ಟೇ ಎಂದು ನಿರ್ಧರಿಸುವುದು ಕಷ್ಟಸಾಧ್ಯ. ಒಂದು ವ್ಯಕ್ತಿತ್ವ ಪರೀಕ್ಷೆಯ ಸಿಂಧುತ್ವವನ್ನು ಅದರ ವಾಸ್ತವಿಕ ಉಪಯೋಗದ ಆಧಾರದ ಮೇಲೆ ನಿರ್ಧರಿಸುವುದು ಸಮಂಜಸವಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಆಲ್ಪೋರ್ಟ್‍ನ ಸಮೀಕ್ಷೆಗೆ ಗಣನೀಯ ಪ್ರಮಾಣದ ಸಿಂಧುತ್ವವಿದೆಯೆಂದು ಹೇಳಬಹುದು. ಈ ಸಮೀಕ್ಷೆಯನ್ನು ಜೀವನದ	ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ. ರೋಗನಿದಾನ ಮನಶ್ಯಾಸ್ತ್ರಜ್ಞರು ಮಾನಸಿಕ ಚಿಕಿತ್ಸಾಲಯಗಳಲ್ಲೂ, ವಿದ್ಯಾರ್ಥಿ ಉಪಬೋಧಕರು ಶಿಕ್ಷಣ ಕ್ಷೇತ್ರಗಳಲ್ಲೂ, ಔದ್ಯೋಗಿಕ ಮನಶ್ಯಾಸ್ತ್ರಜ್ಞರು ಕೈಗಾರಿಕಾ ಕ್ಷೇತ್ರಗಳಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ.
ಆಲ್ಪೋರ್ಟ್‍ನ ಮತ್ತು ಇತರರ ಅಧ್ಯಯನಗಳಿಂದ ದೊರಕಿದ ಫಲಿತಾಂಶಗಳಿಂದ ಪ್ರತಿಷ್ಠೆ, ಶರಣಾಗತಿ ವ್ಯಕ್ತಿತ್ವ ವಿನ್ಯಾಸ ಸಾಮಾನ್ಯ ವಿತರಣಾ ನಿಯಮವನ್ನು ಅನುಸರಿಸುತ್ತದೆಯೆಂಬುದು ತಿಳಿದುಬಂದಿದೆ.
ಕೆಲವು ಕಾರಕಾಂಶಗಳು : ಇಲ್ಲಿಯವರೆಗೆ ದೊರೆತಿರುವ ಹಲವು ಸಂಶೋಧನೆಗಳ ಫಲಿತಾಂಶಗಳಿಂದ ಕೆಲವು ತಥ್ಯಾಂಶಗಳು ಬೆಳಕಿಗೆ ಬಂದಿವೆ. ವ್ಯಕ್ತಿಯ ಎತ್ತರ ಮತ್ತು ತೂಕಗಳಿಗೂ ಪ್ರತಿಷ್ಠೆಗೂ ಮೇಲ್ಮಟ್ಟದ ಸಮಸಹಸಂಬಂಧವಿದೆ. ವ್ಯಾಪಾರಿಗಳೂ ಕಾರ್ಯನಿರ್ವಾಹಕರೂ ಹೆಚ್ಚು ಪ್ರತಿಷ್ಠಾವಂತರಾಗಿರುತ್ತಾರೆ. ಜನನ ಕ್ರಮಕ್ಕೂ ಪ್ರತಿಷ್ಠೆ, ಶರಣಾಗತಿಗೂ ಸಹಸಂಬಂಧವಿರುವಂತೆ ಕಾಣುತ್ತದೆ. ಹಿರಿಯ ಮಗ ಮತ್ತು ಒಬ್ಬನೇ ಮಗ/ಮಗಳು, ಇವರು ಹೆಚ್ಚು ಪ್ರತಿಷ್ಠಾವಂತರಾಗಿರುತ್ತಾರೆ. ಜನನ ಕ್ರಮದಲ್ಲಿ ಮಧ್ಯಮರು ಮತ್ತು ಕಿರಿಯವರು ಈ ವ್ಯಕ್ತಿತ್ವ ವಿನ್ಯಾಸದಲ್ಲಿ ಸರಾಸರಿಗಿಂತ ಕೆಳದರ್ಜೆಯಲ್ಲಿರುತ್ತಾರೆ. ವಟ್ಟರ್‍ನ ಪ್ರಕಾರ ಪೂರ್ವಾಚಾರಪ್ರಿಯರಾದ ಪುರುಷರೂ ತೀವ್ರಗಾಮಿಗಳಾದ (ರ್ಯಾಡಿಕಲ್) ಸ್ತ್ರೀಯರೂ ಹೆಚ್ಚು ಪ್ರತಿಷ್ಠಾವಂತರಾಗಿರುತ್ತಾರೆ.
ಜರ್‍ಸೀಲ್ಡ್ ಮತ್ತು ಸ್ಟೀವನ್ಸ್‍ನ ಸಂಶೋಧನೆಯಿಂದ ಬುದ್ಧಿಶಕ್ತಿ, ಶೈಕ್ಷಣಿಕ ಸಾಧನೆಗಳಿಗೂ ಪ್ರತಿಷ್ಠೆ, ಶರಣಾಗತಿಗೂ ಸಹಸಂಬಂಧವಿರುವಂತೆ ತಿಳಿದುಬಂದಿಲ್ಲ. ಇದರಂತೆಯೆ ಶೈಕ್ಷಣಿಕ ಹಂತ ಅನುವಂಶೀಯತೆ ಮೊದಲಾದ ಕಾರಕಾಂಶಗಳಿಗೂ ಪ್ರತಿಷ್ಠೆ, ಶರಣಾಗತಿಗೂ ಯಾವ ನಿರ್ದಿಷ್ಟ ಸಹಸಂಬಂಧ ಇರುವಂತೆ ಸಿದ್ಧವಾಗಿಲ್ಲ.

ಧರಣೇಂದ್ರಯ್ಯನವರ ಅಧ್ಯಯನ : ಪ್ರತಿಷ್ಠೆ, ಶರಣಾಗತಿಗಳ ವ್ಯಕ್ತಿತ್ವ ವಿನ್ಯಾಸ ಸಾಮಾನ್ಯ ವಿತರಣ ನಿಯಮವನ್ನು ಅನುಸರಿಸುತ್ತದೆಯೆಂಬ ಆಲ್ಪೋರ್ಟ್‍ನ ಅಭಿಮತವನ್ನು ಪರಿಶೀಲಿಸುವುದು ಮತ್ತು ಈ ವಿನ್ಯಾಸ ಕಾಲೇಜು ವಿದ್ಯಾರ್ಥಿವೃಂದದಲ್ಲಿ ಯಾವ ರೀತಿ ಕಂಡುಬರುತ್ತದೆ ಎಂಬುದನ್ನು ತಿಳಿಯುವುದು, ಈ ಅಧ್ಯಯನದ ಪ್ರಮುಖ ಉದ್ದೇಶಗಳು. ಪ್ರಾಸಂಗಿಕವಾಗಿ, ಮಾನವಸಂಸ್ಕøತಿಶಾಸ್ತ್ರದ ವಿದ್ಯಾರ್ಥಿಗಳಿಗೂ ವಿಜ್ಞಾನದ ವಿದ್ಯಾರ್ಥಿಗಳಿಗೂ ಈ ವಿನ್ಯಾಸದಲ್ಲಿ ಇರಬಹುದಾದ ವ್ಯತ್ಯಾಸವನ್ನು ಅಂತೆಯೇ, ಈ ವಿನ್ಯಾಸಕ್ಕೂ ಬಾಲ್ಯ, ವಿದ್ಯಾಭ್ಯಾಸ, ತಂದೆ ಅಥವಾ ಪೋಷಕರ ಉದ್ಯೋಗ, ಮುಂದಾಳುತನ ಮೊದಲಾದ ಕಾರಕಾಂಶಗಳಿಗೂ ಇರಬಹುದಾದ ಸಂಬಂಧವನ್ನು ಅಧ್ಯಯನ ಮಾಡಲಾಯಿತು.

	ಆಲ್ಪೋರ್ಟ್‍ನ ಪ್ರತಿಷ್ಠೇ, ಶರಣಾಗತಿ ಪ್ರತಿಕ್ರಿಯಾ ಸಮೀಕ್ಷೆಯನ್ನು ಸ್ಥಳೀಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲಾಯಿತು. ಪೂರ್ವಾಧ್ಯಯನದ ಸಹಾಯದಿಂದ ಅಂಶವಿಶ್ಲೇಷಣೆ ಮಾಡಿದ ಅನಂತರ ಮೂಲಸಮೀಕ್ಷೆಯಲ್ಲಿದ್ದ 33 ಸನ್ನಿವೇಶಗಳನ್ನು ಸೂಕ್ತ ಮಾರ್ಪಾಡುಗಳಿಂದ 22 ಸನ್ನಿವೇಶಗಳಿಗೆ ಇಳಿಸಲಾಯಿತು. ಪ್ರತಿಯೊಂದು ಅಂಶದಲ್ಲೂ ನಿರೂಪಿತವಾಗಿರುವ ಸನ್ನಿವೇಶದ ಜೊತೆಗೆ, ಸಾಮಾನ್ಯವಾಗಿ ಆ ಸನ್ನಿವೇಶದಲ್ಲಿ ಕಂಡುಬರುವಂಥ 2 ರಿಂದ 4 ವರ್ತನೆಗಳನ್ನು ಮುಂದಿನ ಮಾದರಿಯಲ್ಲಿ ಕೊಡಲಾಗಿದೆ. 

 	ನಿಮ್ಮ ಗೌರವಕ್ಕೆ ಪಾತ್ರರಾದ ಮತ್ತು ನಿಮಗಿಂತ ವಯಸ್ಸಿನಲ್ಲಿ ಹಿರಿಯವರಾದ ಒಬ್ಬರೊಡನೆ ನೀವು ಸಂಭಾಷಣೆ ನಡೆಸುತ್ತಿರುತ್ತೀರಿ. ಯಾವುದೇ ವಿಷಯದಲ್ಲಿ ನಿಮಗೆ ಭಿನ್ನಾಭಿಪ್ರಾಯ ಬರುತ್ತದೆ. ಆಗ ಸಾಮಾನ್ಯವಾಗಿ,
 (ಅ) ಸಂಭಾಷಣೆಯಲ್ಲಿ ನಿಮ್ಮ ಅಭಿಪ್ರಾಯವನ್ನು ಪ್ರತಿಪಾದಿಸುತ್ತೀರಾ ?
 (ಆ) ಅವರ ಅಭಿಪ್ರಾಯವನ್ನು ಒಪ್ಪಿಕೊಂಡಂತೆ ನಟಿಸಿದರೂ ಪರೋಕ್ಷವಾಗಿ ನಿಮ್ಮ ಅಭಿಪ್ರಾಯವನ್ನು 
 ಪ್ರತಿಪಾದಿಸಲು ಪ್ರಯತ್ನಿಸುತ್ತೀರಾ?
 (ಇ) ಅವರ ಅಭಿಪ್ರಾಯವನ್ನು ಮಾತಿನಲ್ಲಿ ಒಪ್ಪಿಕೊಂಡು ಅದನ್ನು ಅಲ್ಲಿಗೇ ಕೈಬಿಡುತ್ತೀರಾ?
ಪರೀಕ್ಷಾರ್ಥಿ ತನ್ನ ಜೀವನಾನುಭವಗಳಿಗೆ ಅನುಗುಣವಾಗಿ ಪ್ರತಿಯೊಂದು ಅಂಶದಲ್ಲೂ ಸೂಚಿತವಾಗಿರುವ ವರ್ತನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು.

ಈ ಸಮೀಕ್ಷೆಯನ್ನು 336 ಕಾಲೇಜು ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡಲಾಯಿತು. ಇದರಿಂದ ದೊರೆತ ಪ್ರಾಪ್ತಾಂಕಗಳ ಪಾರಿಮಾಣಿಕ ವಿಶ್ಲೇಷಣೆ ನಡೆಸಿದಾಗ, ಪ್ರತಿಷ್ಠೆ, ಶರಣಾಗತಿ ವ್ಯಕ್ತಿತ್ವವಿನ್ಯಾಸ ಸಾಮಾನ್ಯ ವಿತರಣ ನಿಯಮವನ್ನು ಅನುಸರಿಸುತ್ತದೆಯೆಂಬ ಆಲ್ಪೋರ್ಟ್‍ನ ಅಭಿಮತ ಸಮಂಜಸವಾಗಿದೆ ಎಂಬುದು ವ್ಯಕ್ತವಾಯಿತು. ಲೇಖಕರು ನಡೆಸಿದ ಅಧ್ಯಯನದಿಂದಾಗಿ ಕೆಳಗೆ ಕೊಟ್ಟಿರುವ ಕೆಲವು ವಿಷಯಗಳ ಪ್ರತಿಪಾದನೆಯಾಗಿದೆ.

1. ಸ್ವಪ್ರತಿಷ್ಠೆ-ಸ್ವಶರಣಾಗತಿ-ವ್ಯಕ್ತಿತ್ವವಿನ್ಯಾಸ, ಕಾಲೇಜು ವಿದ್ಯಾರ್ಥಿವೃಂದದಲ್ಲಿ, ಸಾಮಾನ್ಯ ವಿತರಣ ನಿಯಮಕ್ಕನುಸಾರವಾಗಿ, ಪ್ರಕಟಿತವಾಗುತ್ತದೆ.

2. ಮುಖಂಡತ್ವಕ್ಕೂ, ಸ್ವಪ್ರತಿಷ್ಠೆಗೂ ಗಣನಿಯ ಪ್ರಮಾಣದ ಸಂಬಂಧವಿದೆ. (ಅ.ಖ.=17232)

3. ಬಾಲ್ಯ ವಿದ್ಯಾಭ್ಯಾಸ, ತಂದೆ ಅಥವಾ ಪೋಷಕರ ಉದ್ಯೋಗ ಮೊದಲಾದ ಕಾರಕಾಂಶಗಳು ಈ ವಿನ್ಯಾಸದ ಮೇಲೆ ತಮ್ಮ ಪ್ರಭಾವವನ್ನು ಬೀರುವಂತೆ ಕಂಡುಬರುತ್ತದೆ.

4. ಮಾನವಸಂಸ್ಕøತಿಶಾಸ್ತ್ರಗಳ ವಿದ್ಯಾರ್ಥಿಗಳಿಗೂ, ವಿಜ್ಞಾನದ ವಿದ್ಯಾರ್ಥಿಗಳಿಗೂ ಅಷ್ಟಾಗಿ ವ್ಯತ್ಯಾಸಗಳು ಕಂಡುಬಂದಿಲ್ಲ. ಆದರೂ ಮೊದಲನೆಯ ಗುಂಪಿನವರು, ಎರಡನೆಯವರಿಗಿಂತ ಕೊಂಚ ಹೆಚ್ಚು ಪ್ರತಿಷ್ಠಾವಂತರೆಂದು ಕಾಣುತ್ತದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ